ಅಚ್ಚುಮೊಳೆ ಮುದ್ರಣ
	
ಈ ಕಲೆಯಲ್ಲಿ ಮುದ್ರಣವಾಗುವ ವಿಷಯ ಪ್ರಮುಖವಾದದ್ದು, ರೂಪರೇಷೆಗೆ ಅಂದಕ್ಕೆ ದ್ವಿತೀಯ ಸ್ಥಾನ. ಇದರಲ್ಲಿ ವರ್ಣಮಾಲೆಯ ಅಕ್ಷರಗಳು ಹೆಚ್ಚಾಗಿ ಬಳಕೆಯಾಗುತ್ತವೆ.
	
ಎಲ್ಲ ಮುದ್ರಣಕಾರರೂ ಸಾಧಾರಣವಾಗಿ ಮುದ್ರಣಕಲೆಗೆ ಸಂಬಂಧಿಸಿದ ಕೆಲವು ಸಾಮಾನ್ಯ ನಿಯಮಗಳನ್ನು ಅನುಸರಿಸಬೇಕು. ಮುದ್ರಕನ ರೋಮನ್ ವರ್ಣಮಾಲೆಯಲ್ಲಿ. ಕ್ಯಾಪಿಟಲ್, ಸಣ್ಣ ಕ್ಯಾಪಿಟಲ್ ಸಣ್ಣ ಅಕ್ಷರಗಳು, ಅಂಕಿಗಳು, ಓರೆ (ಇಟ್ಯಾಲಿಕ್) ಕ್ಯಾಪಿಟಲ್ ಅಕ್ಷರಗಳು ಮತ್ತು ಓರೆ ಸಣ್ಣ ಅಕ್ಷರಗಳು ಮುಂತಾಗಿ ಸುಮಾರು 200 ವಿಧವಾದ ಅಚ್ಚುಮೊಳೆಗಳಿವೆ. ನಮ್ಮ ದೇಶದ ಭಾಷೆಗಳಲ್ಲಿ ಪೂರ್ಣಾಕ್ಷರಗಳೂ ಅರ್ಧ ಅಕ್ಷರಗಳೂ ತಲೆಕಟ್ಟುಗಳೂ ಒತ್ತುಗಳೂ ಅಂಕಿಗಳೂ ಮುಂತಾದ ವಿವಿಧ ಮೊಳೆಗಳಿವೆ. ಅಲ್ಲದೆ ಶಬ್ದಗಳ ಮಧ್ಯದಲ್ಲಿ ಸೇರಿಸುವ (ಸ್ಪೇಸ್) ಸಾಲುಗಳ ಮಧ್ಯದಲ್ಲಿ ಸೇರಿಸುವ (ಲೆಡ್ಸ್) ತೆರಪುಗಳೂ ರೇಖೆಗಳನ್ನು ಮುದ್ರಿಸುವ ರೂಲುಗಳೂ ಅಲಂಕಾರಿಕ ಅಂಚುಗಳೂ ಚಿತ್ರಗಳನ್ನು ಮುದ್ರಿಸುವ ಮರದ ಅಥವಾ ಲೋಹದ ಫಲಕಗಳೂ ಮುದ್ರಕನಿಗೆ ಬೇಕಾದ ಸಾಮಗ್ರಿಗಳಲ್ಲಿ ಸೇರಿವೆ. ತೆರಪುಗಳು ವಿನಾ ಇತರ ಎಲ್ಲವು ಒಂದೇ ಮಟ್ಟದಲ್ಲಿರಬೇಕು.
	
ಅಚ್ಚುಮೊಳೆ ವರ್ಣಮಾಲೆಯಲ್ಲಿ ಅನೇಕ ತರದ ಆಕೃತಿಗಳನ್ನು (ಸ್ಟೈಲ್) ಕಲಾನಿಪುಣರು ತಯಾರಿಸಿದ್ದಾರೆ. ಕೆಲವು ಸಾಮಾನ್ಯ ದುಂಡಾಕೃತಿಯವು. ಕೆಲವು ಸಂಕುಚಿತ (ಕಂಡೆನ್ಸ್‍ಡ್) ಆಕೃತಿಯವು. ಮತ್ತೆ ಕೆಲವು ಉಬ್ಬಿದ ಆಕೃತಿಯವು (ಎಕ್ಸ್‍ಪ್ಯಾಂಡೆಡ್). ಕೆಲವು ಅಕ್ಷರಗಳ ರೂಪರೇಷೆಗಳು ಸಾಮಾನ್ಯ ಗಾತ್ರದಲ್ಲಿರುತ್ತವೆ. ಇನ್ನು ಕೆಲವು ತೆಳುವಾಗಿರುತ್ತವೆ. ಮತ್ತೆ ಕೆಲವು ದಪ್ಪವಾಗಿರುತ್ತವೆ (ಬೋಲ್ಡ್). ಮುದ್ರಿಸಬೇಕಾದ ವಿಷಯಕ್ಕೆ ಸೂಕ್ತಶೈಲಿಯ ಅಚ್ಚುಮೊಳೆಗಳನ್ನು ಚುನಾಯಿಸಿಕೊಂಡು ಜೋಡಣೆ ಮಾಡುವುದೇ ಒಂದು ಕಲೆ. ಈ ಕಲೆಯಲ್ಲಿ ಪ್ರಯೋಗದ ಆಧಾರದ ಮೇಲೆ ನಿರ್ಮಿಸಲ್ಪಟ್ಟ ಕೆಲವು ತತ್ವ್ತಗಳನ್ನು ಅನುಸರಿಸುವುದುಂಟು.
	
ಮೊಳೆಗಳನ್ನು ಎಲ್ಲ ವಿಧವಾದ ಎಂದರೆ ಬೈಬಲ್, ವಿಶ್ವಕೋಶ ಮುಂತಾದುವುಗಳಿಗೆ ಉಪಯೋಗಿಸುವ ಸಣ್ಣ ಗಾತ್ರದಿಂದ (6 ಪಾಯಿಂಟ್ ಮೊಳೆಗಳು) ಭಿತ್ತಿಪತ್ರಗಳಿಗೆ (ಪೋಸ್ಟರ್) ಉಪಯೋಗಿಸುವ ದೊಡ್ಡ ಗಾತ್ರದ 2'-3'ದಲ್ಲಿಯೂ ತಯಾರಿಸುತ್ತಾರೆ. ಮುದ್ರಿಸಬೇಕಾದ ಪುಸ್ತಕ ಅಥವಾ ಕಾಗದದ ಹಾಳೆಯ ಅಗಲಕ್ಕೆ ಅನುಗುಣವಾಗಿ, ಅಚ್ಚುಮೊಳೆಯ ಸಾಲುಗಳು ಸಹ ಇರುತ್ತವೆ. ಕಾಗದದಲ್ಲಿ ಅಚ್ಚಾದ ಮೇಲೆ ಅದರ ಸುತ್ತಲೂ ಕೈಯಾಡಿಸಲಿಕ್ಕೂ ಅಂದವಾಗಿ ಕಾಣುವುದಕ್ಕೂ ಸಾಕಾದಷ್ಟು ಖಾಲಿ ಅಂಚು (ಮಾರ್ಜಿನ್) ಸ್ಥಳವಿರಬೇಕು. ಒಂದು ಪುಸ್ತಕದ ಬೆನ್ನಿಗಿಂತ ತಲೆಯ ಮೇಲೆ ಜಾಸ್ತಿ ಸ್ಥಳ ಇರಬೇಕು. ಮೇಲ್ಭಾಗ ಮುಂಭಾಗಕ್ಕಿಂತ ಕೆಳಗಡೆ ಹೆಚ್ಚಿದ ಸ್ಥಳವಿರಬೇಕು. ಒಂದೇ ಹಾಳೆಯಲ್ಲಿ ಮುದ್ರಿಸುವಾಗ ಎರಡೂ ಪಕ್ಕಗಳಲ್ಲಿ ಒಂದೇ ಸಮನಾದ ಸ್ಥಳ ಬಿಟ್ಟಿರಬೇಕು. ತಲೆಯ ಭಾಗಕ್ಕಿಂತ ಕೆಳಗಡೆ ಜಾಸ್ತಿ ಸ್ಥಳವಿರಬೇಕು. ವಿಶೇಷ ಸಂಪುಟಗಳಲ್ಲಿ ಅಚ್ಚಾದ ಪುಟಗಳ ಸುತ್ತಲೂ ಈ ಖಾಲಿ ಸ್ಥಳ ಹೇರಳವಾಗಿರಬೇಕು.
	
ಅಚ್ಚಿನ ಮೊಳೆ ಜೋಡಿಸುವಾಗ ಮೊಳೆಯ ಗಾತ್ರಕ್ಕೆ ತಕ್ಕಂತೆ ಸಾಲುಗಳ ಉದ್ದವನ್ನು ನಿರ್ಧರಿಸಬೇಕಾಗುತ್ತದೆ. ಅಕ್ಷರವೂ ಸಣ್ಣ್ಣದಾಗಿದ್ದು ಸಾಲೂ ಉದ್ದವಾಗಿದ್ದರೆ ಓದುಗನ ಕಣ್ಣಿಗೆ ಹೆಚ್ಚು ಶ್ರಮವಾಗುತ್ತದೆ. ಆದ್ದರಿಂದ ಅಕ್ಷರ ಸಣ್ಣದಾಗಿದ್ದಲ್ಲಿ ಸಾಲುಗಳ ಉದ್ದ ಸಣ್ಣದಾಗಿಯೂ ಅಕ್ಷರ ದಪ್ಪವಾಗಿದ್ದಲ್ಲಿ ಉದ್ದ ಹೆಚ್ಚಾಗಿಯೂ ಇರಬೇಕಾಗುತ್ತದೆ. ತೀರ ದಪ್ಪವಾದ ಅಕ್ಷರಗಳಲ್ಲಿ ಅಚ್ಚಾಗುವ ಭಿತ್ತಿಪತ್ರಗಳ ಸಾಲಿನ ಉದ್ದ ಮೂರು ನಾಲ್ಕು ಅಡಿಗಳಿದ್ದರೂ ಬಾಧಕವಿಲ್ಲ. ಆದುದರಿಂದಲೇ 10 ಪಾಯಿಂಟ್ ಮೊಳೆಗಳಲ್ಲಿ ಅಚ್ಚಾಗುವ ದಿನಪತ್ರಿಕೆ ಮಾಸಪತ್ರಿಕೆಗಳವರು ಪ್ರತಿಪುಟದಲ್ಲೂ ತೀರಾ ಚಿಕ್ಕ ಸಾಲುಗಳನ್ನುಳ್ಳ ಹಲವಾರು ಕಾಲಂಗಳನ್ನು ಅಳವಡಿಸಿರುತ್ತಾರೆ.
	
ಮುದ್ರಿಸಿದ ಪುಸ್ತಕ ಹೆಚ್ಚು ಸುಲಭಗ್ರಾಹ್ಯವೂ ಆಗಬೇಕಾದರೆ ಪ್ರತಿಸಾಲಿನ ಮಧ್ಯೆ ಸಾಕಷ್ಟು ಜಾಗವಿರಬೇಕು. ಅದಕ್ಕಾಗಿ ಒಂದೇ ಗಾತ್ರದ ಲೆಡ್‍ಗಳನ್ನು ಬಳಸಲಾಗುತ್ತದೆ. ಹಾಗಿಲ್ಲದಿದ್ದಲ್ಲಿ ಸಾಲುಗಳ ಮಧ್ಯದ ಜಾಗ ತೀರ ಕಡಿಮೆಯಾಗಿ ಓದುಗನಿಗೆ ತೊಂದರೆಯಾಗುತ್ತದೆ.
	
ರೋಮನ್ ಲಿಪಿಯ ಕ್ಯಾಪಿಟಲ್ ಅಚ್ಚುಮೊಳೆಗಳನ್ನು ಪ್ರಾರಂಭದ ಒಂದೆರಡು ಶಬ್ದಗಳಿಗೆ, ಪುಸ್ತಕದ ಅಥವಾ ಇತರ ವಿಭಾಗದ ಶೀರ್ಷಿಕೆ ಮುಂತಾದುವುಗಳಿಗೆ ಮಾತ್ರ ಉಪಯೋಗಿಸಬಹುದು. ಆದ್ಯಂತ ಅದನ್ನೇ ಉಪಯೋಗಿಸಬಾರದು. ಅನಿವಾರ್ಯ ಸಂದರ್ಭಗಳಲ್ಲಿ ಕ್ಯಾಪಿಟಲ್ ಮತ್ತು ಸಣ್ಣ ಕ್ಯಾಪಿಟಲ್‍ಗಳನ್ನು ಸೇರಿಸಿ ಉಪಯೋಗಿಸಬಹುದು. ಪುಸ್ತಕದ ಆಕೃತಿ, ಅದರಲ್ಲಿ ಮುದ್ರಿತವಾದ ವಿಷಯದ ಆಕೃತಿ ಸಾಮಾನ್ಯವಾಗಿ ಆಯಾಕಾರವಾಗಿರಬೇಕು.
	
ಮೇಲೆ ಹೇಳಿದಂತೆ ಅಚ್ಚಿನ ಮೊಳೆ ಜೋಡಿಸುವಾಗ ಪುಸ್ತಕದ ಮೊದಲನೆಯ ಪ್ಯಾರಾದ ಪ್ರಥಮ ಶಬ್ದದ ಪ್ರಥಮಾಕ್ಷರವನ್ನು ಮುಂಬರುವ ಅಕ್ಷರಗಳಿಗಿಂತ ದೊಡ್ಡ ಅಚ್ಚು ಮೊಳೆಯಲ್ಲಿ ಜೋಡಿಸುವುದು ಒಂದು ವಿಶೇಷ ಪದ್ಧತಿಯಾಗಿದೆ. ಪುಸ್ತಕದ ಹಾಗೂ ಅಧ್ಯಾಯದ ಶೀರ್ಷಿಕೆಗಳನ್ನು ಪ್ರತಿ ಪುಟದ ಮೇಲ್ಭಾಗದಲ್ಲಿಯಾಗಲಿ ತಳಭಾಗದಲ್ಲಿಯಾಗಲಿ ಪುಟ ಸಂಖ್ಯೆಗಳ ಜೊತೆಗೆ ಅಚ್ಚು ಮಾಡುತ್ತಾರೆ. ಸಾಮಾನ್ಯವಾಗಿ ಪುಸ್ತಕ ಶೀರ್ಷಿಕೆ ಎಡಪುಟದಲ್ಲೂ ಅಧ್ಯಾಯಶೀರ್ಷಿಕೆ ಬಲಪುಟದಲ್ಲೂ ಬರಬೇಕು. ಈ ವಿನ್ಯಾಸದಲ್ಲಿ ಹೆಚ್ಚು ವೈವಿಧ್ಯಕ್ಕೆ ಅವಕಾಶವಿದೆ.
	
ಮುಖಪತ್ರ ವಿನ್ಯಾಸದಲ್ಲಿ (ಟೈಟ್‍ಲ್ ಪೇಜ್) ಉಪಯೋಗಿಸುವ ಮೊಳೆಗಳ ಗಾತ್ರ ಒಳಪುಟಗಳ ಮೊಳೆಯ ಗಾತ್ರಕ್ಕಿಂತ ಎರಡರಷ್ಟಾದರೂ ಹೆಚ್ಚಾಗಿರಬೇಕು.
(ಎಂ.ಎ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ